ಬೇಯರ್, ಯೋಹನ್ ಫ್ರೀಡ್ರಿಕ್ ವಿಲ್‍ಹೆಲ್ಮ್ ಅಡಾಲ್ಫ್ ಫಾನ್
1835-1917. ಜರ್ಮನಿಯ ರಸಾಯನವಿಜ್ಞಾನಿ. ಸಂಶ್ಲೇಷನ ಕಾರ್ಬನಿಕ ರಸಾಯನ ವಿಜ್ಞಾನ ಪ್ರವೀಣ. ಯೋಹನ್ ಜಕೋಬ್ ಬೇಯರನ ಹಿರಿಯಮಗ. 1835 ಅಕ್ಟೋಬರ್ 31ರಂದು ಬರ್ಲಿನ್ನಿನಲ್ಲಿ ಜನನ. ಆರಂಭದ ಶಿಕ್ಷಣ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ನಡೆಯಿತು. ಬಳಿಕ ಹೈಡಲ್ಬರ್ಗಿನಲ್ಲಿ ಬುನ್ಸೆನ್ ಜೊತೆ ಪ್ರಾಯೋಗಿಕ ರಸಾಯನ ವಿಜ್ಞಾನದಲ್ಲಿ ತರಬೇತಿ ಪಡೆದ. ಅದರಿಂದ ತೃಪ್ತನಾಗದೆ ಅದೇ ಊರಲ್ಲಿದ್ದ ಕೆಕುಲೆಯ ಸ್ವಂತ ಪ್ರಯೋಗ ಶಾಲೆಗೆ ಪ್ರವೇಶ ಪಡೆದು, ಅಲ್ಲಿ ಕೆಲವು ವರ್ಷ ಅಧ್ಯಯನ ಮಾಡಿ ಆರ್ಸೆನಿಕ್ ಮೀಥೈಲ್ ಕ್ಲೋರೈಡ್ ಬಗೆಗೆ ಸಂಶೋಧನೆ ಕೈಗೊಂಡು ಲಭ್ಯ ಫಲಿತಾಂಶವನ್ನು ಬರ್ಲಿನ್ ವಿಶ್ವವಿದ್ಯಾಲಯಕ್ಕೆ ಸಾದರ ಪಡಿಸಿ ಡಾಕ್ಟರೇಟ್ ಪದವಿ ಪಡೆದ (1858). ಮುಂದೆ ಬರ್ಲಿನ್ನಿಗೆ ಬಂದು ಕೆಲಕಾಲ ಅಧ್ಯಾಪಕನಾಗಿ ಕೆಲಸ ಮಾಡಿದ. 1872ರಲ್ಲಿ ಈತನನ್ನು ಸ್ಟ್ರಾಸ್ ಬರ್ಗಿನ ನ್ಯೂ ಇಂಪಿರಿಯಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ನೇಮಿಸಲಾಯಿತು. 1875ರಲ್ಲಿ ಲೇಬೆಗ್ ಎಂಬ ವಿಜ್ಞಾನಿಯ ಮರಣದಿಂದ ತೆರನಾದ ಮ್ಯೂನಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹುದ್ದೆ ಸೇರಲು ಕರೆಬಂದಿತು. ಆ ಪ್ರಕಾರ ಮ್ಯೂನಿಕ್ಕಿನಲ್ಲಿದ್ದು ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಂಡು ಆ ಪ್ರಯೋಗಶಾಲೆಯ ಪ್ರತಿಷ್ಠೆಯನ್ನು ಹೆಚ್ಚಿಸಿದ.

ಸಂಶ್ಲೇಷಕ ಕಾರ್ಬನಿಕ ರಸಾಯನ ವಿಜ್ಞಾನ ಇವನ ಸಂಶೋಧನ ಕ್ಷೇತ್ರ. ಸೈದ್ಧಾಂತಿಕ ರಸಾಯನ ವಿಜ್ಞಾನಕ್ಕಿಂತ ಪ್ರಾಯೋಗಿಕ ರಸಾಯನ ವಿಜ್ಞಾನದಲ್ಲಿ ಅಧಿಕ ಆಸಕ್ತಿ. 1863ರಲ್ಲಿ ಈತ ಬಾರ್ಬುಟೆರಿಕ್ ಆಮ್ಲವನ್ನು ಪತ್ತೆ ಹಚ್ಚಿದ. ಇದು ನಿದ್ರಾಮಾತ್ರೆಗಳಲ್ಲಿರುವ ಪ್ರಧಾನ ಸಂಯುಕ್ತ. ತನ್ನ ಗೆಳತಿ ಬಾರ್ಬರಾ ಎನ್ನುವವಳ ನೆನಪಿಗಾಗಿ ಈ ಹೆಸರಿಟ್ಟನೆಂದು ಪ್ರತೀತಿ. ಸಸ್ಯಗಳಲ್ಲಿ ಶರ್ಕರಗಳು ಸಂಶ್ಲೇಷಣೆಯಾಗುವ ಬಗೆಯನ್ನು ಬೇಯರ್ ವಿವರಿಸಿದ. ವಿಶ್ಲೇಷಣಾತ್ಮಕ ರಸಾಯನ ವಿಜ್ಞಾನದಲ್ಲಿ ಇಂದಿಗೂ ಅತ್ಯುಪಯುಕ್ತವಾದ ಪಿನಾಲ್ ಪ್ಥಲೀನ್ ಎಂಬ ಸೂಚಕವನ್ನು ತಯಾರಿಸಿದ. ಆವುಗಳಲ್ಲಿ ಇದು ವರ್ಣರಹಿತವಾಗಿದ್ದ ಕ್ಷಾರಗಳಲ್ಲಿ ಗುಲಾಬಿ ಬಣ್ಣದಾಗುತ್ತದೆ. ಈ ಸೂಚಕವನ್ನು ಉಪಯೋಗಿಸಿ ಆಮ್ಲವಾಗಲಿ ಕ್ಷಾರವಾಗಲಿ ಇದೆಯೊ ಇಲ್ಲವೋ ಇದ್ದರೆ ಅವುಗಳ ಪ್ರಮಾಣವೆಷ್ಟು ಎಂದು ಕಂಡು ಹಿಡಿಯಲು ಸಹಾಯವಾಗುತ್ತದೆ. 
ಬೇಯರ್ ಪ್ರಸಿದ್ಧನಾದದ್ದು ಮುಖ್ಯವಾಗಿ ಇಂಡಿಗೊ (ನೀಲಿಬಣ್ಣ) ಸಂಬಂಧವಾಗಿ ಆತ ಮಾಡಿದ ಸಂಶೋಧನೆಗಳಿಂದ. ಇಂಡಿಗೊ ಎಂಬ ನೀಲಿ ಬಣ್ಣ ಅನೇಕ ಶತಮಾನಗಳಿಂದ ಪರಿಚಿತವಾಗಿದೆ. ಇದರ ಆಕರ ಭಾರತ ಮತ್ತು ಆಗ್ನೇಯ ದೇಶಗಳಲ್ಲಿ ಬೆಳೆಯುವ ಇಂಡಿಗೊಫೆರ ಎಂಬ ಜಾತಿಯ ಸಸ್ಯ. ಈ ಸಸ್ಯಗಳು ಇಂಡಿಕಾನ್ ಎಂಬ ವಸ್ತುವನ್ನು ಉತ್ಪಾದಿಸುತ್ತವೆ. ಇಂಡಿಕಾನನ್ನು ಹುದುಗುಗೊಳಿಸುವುದರಿಂದ ಇಂಡಿಗೂ ದೊರೆಯುವುದು, ಇಂಡಿಗೊವನ್ನು ಕೃತಕವಾಗಿ ಸಂಶ್ಲೇಷಿಸುವ ವಿಧಾನವನ್ನು ಬೇಯರ್ ಶೋಧಿಸಿದ. ಸಂಶ್ಲೇಷಿತ ಇಂಡಿಗೊ ನೈಸರ್ಗಿಕ ಇಂಡಿಗೊಕ್ಕಿಂತ ಉತ್ತಮವಾಗಿದ್ದ ಇದು ಬಣ್ಣದ ಉದ್ದಿಮೆಗೆ ಪುಟಕೊಟ್ಟಿತು. ಈ ಸಂಶೋಧನೆ ಈತನಿಗೆ 1905ರ ಸಾಲಿನ ನೊಬೆಲ್ ಪಾರಿತೋಷಿಕ ತಂದುಕೊಟ್ಟಿತು. 

ಬೇಯರನ ಶ್ರಮ ಪ್ರಮೇಯ (ಬೇಯರ್ಸ್ ಸ್ಟ್ರೇನ್ ಥಿಯರಿ) ಇಂಬ ಒಂದು ಪ್ರಮೇಯವನ್ನು ಈತ ಪ್ರತಿಪಾದಿಸಿದ. ಐದು ಅಥವಾ ಆರು ಕಾರ್ಬನ್ ಪರಮಾಣು ಇರುವ ಚಕ್ರೀಯ ಆಲ್ಕೇನುಗಳು ಮಿಕ್ಕ ಚಕ್ರೀಯ ಆಲ್ಕೇನುಗಳಿಗಿಂತ ಸ್ಥಿರವಾಗಲು ಕಾರಣವೇನು ಎಂಬುದನ್ನು ವಿವರಿಸುವಲ್ಲಿ ಬೇಯರನ ಶ್ರಮ ಪ್ರಮೇಯ ಸಹಾಯಕಾರಿಯಾಯಿತು. 				
  (ಎಸ್.ವೈ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ